ಈ ಭೂಲೋಕದಲ್ಲಿ ಬಹುವಿಧವಾದ ಜೀವಕೋಟಿಗಳು ವಾಸವಾಗಿರುವಂತೆ, ಗಂಧ, ಶೀತ, ಉಷ್ಣ ಈ ಗುಣಗಳನ್ನೊಳಗೊಂಡ ವಾಯುಲೋಕದಲ್ಲಿಯೂ ಅನಂತ ಜೀವಕೋಟಿಗಳಿವೆ. ಇದರ ತತ್ವ ಕೆಲವು ಕಲ್ಲು ತೂರುವಿಕೆ ಮೊದಲಾದ ಪ್ರವೃತ್ತಿಗಳಿಂದಲೂ, ಅದು ಕೆಲ ಮಾಂತ್ರಿಕರು ನೆರೆವೇರಿಸುವುದರಿಂದಲೂ, ದೇವತಾಗ್ರಸ್ಥರು ಮಾಡುವ ಕೆಲ ಅದ್ಭುತ ಕೃತ್ಯಗಳಿಂದಲೂ ಸಮಾನ್ಯವಾಗಿ ಸ್ಪಷ್ಟವಾಗುತ್ತದೆ. ಮಾತ್ರವಲ್ಲ, ಅಂತರಚಾರಿಗಳು ಇದ್ದಾರೆಂದೂ, ಅವರು ಕೆಲ ಭಕ್ತರ ಮುಂದೆ ಪ್ರತ್ಯಕ್ಷಗೊಂಡು ಅವರಿಗೆ ಬೇಕಾದ ಎಲ್ಲ ವರಗಳನ್ನೂ ಕೊಟ್ಟಿದ್ದಾರೆಂದೂ, ಇಂದಿಗೂ ಅವರ ಉಪಾಸನೆಯಲ್ಲಿ ತೊಡಗಿರುವ ಭಕ್ತರಿಗೆ ಹೀಗೆಯೇ ಆಗುತ್ತದೆಂದೂ, ದೇವತಾಸಿದ್ಧಿಯುಳ್ಳ ಜನ ಈಗಲೂ ಅನೇಕರಿದ್ದಾರೆ ಎಂದೂ ಮುಂತಾದ್ದು ಸಾಮಾನ್ಯವಾಗಿ ಲೋಕಸಮ್ಮತವಾಗಿದೆ. ಆದ್ದರಿಂದ ಇಹಲೋಕವಾಸಿಗಳಂತೆ ಪರಲೋಕವಾಸಿಗಳೂ ಇದ್ದಾರೆಂಬುದು ನಿರ್ವಿವಾದಿತ. ಅವರಿಗೆ ವಾಯುವಿನಂತೆ ವೇಗವುಳ್ಳದ್ದರಿಂದಲೂ, ಅದೃಷ್ಟರೂಪಿಗಳಾಗಿದ್ದು ಅತಿಕಠಿನವೃತ್ತಿಗಳಲ್ಲಿ ತೊಡಗಿರಿವುದರಿಂದಲೂ, ಇವರಲ್ಲಿ ಕೆಲವರು ಸಮೀಪವಾದಾಗ ಉಷ್ಣವೂ, ಕೆಲವರ ಸಾನ್ನಿದ್ಧ್ಯದಲ್ಲಿ ಶೀತವೂ, ಕೆಲವರಿಗೆ ಸುಗಂಧವೂ, ಕೆಲವರಿಗೆ ದುರ್ಗಂಧವೂ, ಮತ್ತಿತರ ಎಲ್ಲ ಸಂಗತಿಗಳಿಂದಲೂ ಇವರನ್ನು ವಾಯುಲೋಕವಾಸಿಗಳೆಂದು ಸಂಕ್ಷಿಪ್ತ್ವಾಗಿ ಪ್ರಸ್ತಾಪಿಸಲಾಗಿದೆ. ಇವೆಲ್ಲವನ್ನು ಇಲ್ಲಿ ಈಗ ವಿಸ್ತರಿಸಿ ಹೇಳುತ್ತಿಲ್ಲ.
ಈ ವಾಯುಲೋಕವಾಸಿಗಳಲ್ಲಿ ಕೆಲವರಿಗೆ ಹಾಲಲ್ಲಿಯೂ, ಕೆಲವರಿಗೆ ತುಪ್ಪದಲ್ಲಿಯೂ, ಕೆಲವರಿಗೆ ಜೇನಲ್ಲಿಯೂ, ಕೆಲವರಿಗೆ ಪಾಯಸದಲ್ಲಿಯೂ, ಕೆಲವರುಗೆ ಹಣ್ಣುವರ್ಗಗಳಲ್ಲಿಯೂ, ಕೆಲವರಿಗೆ ಉಪಾಹಾರಗಳಲ್ಲಿಯೂ, ಕೆಲವರಿಗೆ ಕಂದವರ್ಗಗಳಲ್ಲಿಯೂ ಒಲವುಂಟು. ಕೆಲವರ ಒಲವು ಪರಿಮಳದ್ರವ್ಯದಲ್ಲಿ, ಕೆಲವರ ಒಲವು ಮಂತ್ರದಲ್ಲಿ, ಕೆಲವರದು ತಂತ್ರದಲ್ಲಿ, ಕೆಲವರದು ಯಂತ್ರದಲ್ಲಿ, ಕೆಲವರದು ನೃತ್ಯದಲ್ಲಿ, ಕೆಲವರದು ವಾದ್ಯದಲ್ಲಿ, ಕೆಲವರದು ಗೀತೆಯಲ್ಲಿ, ಕೆಲವರಿಗೆ ಎಲ್ಲದರಲ್ಲಿಯೂ ಒಲವುಂಟು. ಕೆಲವರು ಮಾಂಸವುಣ್ಣುವರು, ಕೆಲವರು ರಕ್ತ ಕುಡಿಯುವವರು, ಕೆಲವರು ಮದ್ಯಪಾನಿಗಳು, ಕೆಲವರು ಪ್ರೇತಭಕ್ಷಕರು, ಕೆಲವರು ಬಾಲಭಕ್ಷಕರು, ಕೆಲವರು ಬಸಿರು ತೆಗೆಯುವವರು, ಕೆಲವರು ಶುಕ್ಳಭೋಜಿಗಳು, ಕೆಲವರು ಕಾಮಿಗಳು, ಕೆಲವರು ಭೋಗಿಗಳು, ಕೆಲವರು ಕೃಶಗಾತ್ರರು, ಕೆಲವರು ಸ್ಥೂಲರು. ಕೆಲವರ ಬಣ್ಣ ಬಿಳಿಯದು, ಕೆಲವರ ಬಣ್ಣ ಕಪ್ಪು, ಕೆಲವರಿಗೆ ಹಳದಿ ಬಣ್ಣ, ಕೆಲವರು ಚಿತ್ರವರ್ಣರು, ಕೆಲವರು ಹ್ರಸ್ವರು, ಕೆಲವರು ದೀರ್ಘರು. ಕೆಲವರು ಎತ್ತು ವಾಹನವಾಗಿ ಉಳ್ಳವರು, ಕೆಲವರು ನವಿಲು ವಾಹನವಾಗಿಯುಳ್ಳವರು, ಕೆಲವರು ಗರುಡನ ಮೇಲೇರಿ ಹೋಗುವವರು. ಕೆಲವರ ವಾಹನ ಕುದುರೆ. ಕೆಲವರು ಪಕ್ಷಿಮುಖಿಗಳು, ಕೆಲವರು ಅಶ್ವಮುಖರು,ಕೆಲವರು ಸರ್ಪದ ಮುಖದಂದಿರುವವರು. ಕೆಲವರು ಅಶುದ್ಧ ಭೂವಾಸಿಗಳು, ಕೆಲವರು ಶುದ್ಧಭುವಾಸಿಗಳು. ಕೆಲವರು ಶುಕ್ಳಾಂಬರಧಾರಿಗಳು, ಕೆಲವರು ಪೀತಾಂಬರ ಧಾರಿಗಳು, ಕೆಲವರು ನೀಲಾಂಬರಿಗಳು, ಕೆಲವರು ಜೀರ್ಣವಸ್ತ್ರವುಳ್ಳವರು, ಕೆಲವರು ಕೌಪೀನಧಾರಿಗಳು, ಕೆಲವರು ದಿಗಂಬರರು, ಕೆಲವರು ಜಟಿಲರು, ಕೆಲವರು ಮುಂಡಿಗಳು. ಕೆಲವರು ಶಾಂತರು, ಕೆಲವರು ಕ್ರೂರಿಗಳು, ಕೆಲವರು ಶಿಷ್ಟರು, ಕೆಲವರು ದುಷ್ಟರು. ಕೆಲವರು ವಾಗ್ಶಕ್ತಿಯುಳ್ಳವರು, ಕೆಲವರು ಸೃಷ್ಟಿಕರ್ತರು, ಕೆಲವರು ರಕ್ಷಕರು. ಕೆಲವರು ಕೊರೆದಾಡೆಯುಳ್ಳವರು, ಕೆಲವರು ಭಯಂಕರ ರೂಪಿಗಳು, ಕೆಲವರು ಚೆಲುವುಳ್ಳವರು. ಕೆಲವರು ಬಲಿ ಕೊಳ್ಳುವವರು, ಕೆಲವರು ತರ್ಪಣ ಪ್ರಿಯರು, ಕೆಲವರು ಹೋಮಪ್ರಿಯರು, ಕೆಲವರು ಅಮೃತಭೋಜಿಗಳು. ಕೆಲವರು ಪರಮಾಣುವಿನಂತೆ ಪರಕಾಯ ಹೊಗುವವರು, ಕೆಲವರು ಪರ್ವತದಂತಿರಲು ಶಕ್ತಿಯುಳ್ಳವವರು. ಕೆಲವರು ಹೀಗೆ ಮಲೆಯಂತಿದ್ದರೂ ಹೂವಿನಂತೆ ಭಾರವಿಲ್ಲದವರು, ಕೆಲವರು ಹೂವಿನಂತಿದ್ದರೂ ಪರ್ವತದಂತೆ ಭಾರವುಳ್ಳವರು.
ಕೆಲವರು ಸಕಲರಿಗೂ ಅಧಿಪತ್ಯ ವಹಿಸುವವರು, ಕೆಲವರು ಸಕಲ ಪದಾರ್ಥಗಳನ್ನು ವಶೀಕರಿಸುವವರು, ಕೆಲವರು ಸಕಲದಿಕ್ಕುಗಳಲ್ಲೂ ನಿರ್ವಿಘ್ನ ಸಂಚರಿಸುವವರು, ಕೆಲವರು ಒಂದೇಹೊತ್ತು ಹಲವು ದಿಕ್ಕುಗಳಲ್ಲಿ ಕಾಣಿಸಿಕೊಳ್ಳುವವವರು, ಕೆಲವರು ಈ ಎಲ್ಲಸಿದ್ಧಿಗಳನ್ನು ಹೊಂದಿರುವವರು, ಕೆಲವರು ಕೆಲ ಸಿದ್ಧಿಗಳನ್ನು ಅಷ್ಟಿಷ್ಟು ಪಡೆದವವರು. ಇವುಗಳಲ್ಲದೆ ಇದೇ ರೀತಿ ಅನೇಕ ಸಿದ್ಧಿಭೇದಗಳನ್ನು ವರ್ಣವಿಶೇಷಗಳನ್ನೂ, ಆಹಾರವಿಶೇಷಗಳು, ಆಕಾರವಿಶೇಷ, ವಾಹನವಿಶೇಷ, ಹೀಗೆ ಎಲ್ಲವನ್ನು ಹೊಂದಿರುವ ಶುದ್ಧದೈವಗಳು, ಅಶುದ್ಧ ದುಷ್ಟ ಭೂತಪ್ರೇತಯಕ್ಷರಾಕ್ಷಸ ಪೈಶಾಚಜಾತಿಗಳೂ ಇವೆ.
ಇವರು ಎಲ್ಲ ಪ್ರಾಣಿಗಳ ಹೃದಯವನ್ನು ಪ್ರವೇಶಿಸಿ ಬುದ್ಧಿಯನ್ನು ಶುದ್ಧಗೊಳಿಸುವುದಕ್ಕೂ, ಭ್ರಮಿಸಿ ಮಲಿನಗೊಳಿಸುವುದಕ್ಕೂ, ಚೆನ್ನಾಗಿಸುವುದಕ್ಕೂ, ಎಲ್ಲ ಸಂಪತ್ತುಗಳ ನೀಡುವುದಕ್ಕೂ, ತೆಗೆಯುವುದಕ್ಕೂ, ರಕ್ಷಿಸುವುದಕ್ಕೂ, ಶಿಕ್ಷಿಸುವುದಕ್ಕೂ, ಮತ್ತಿತರ ಪ್ರವೃತ್ತಿಗೂ ಶಕ್ತಿಯುಳ್ಳವರಾಗಿದ್ದಾರೆ. ಆದ್ದರಿಂದ ನಾವು ಇವರನ್ನು ಇಷ್ಟೋಪಚಾರಗಳೊಂದಿಗೆ ಭಜಿಸಿ ಒಲಿಸಿಕೊಳ್ಳುವುದು ನಮ್ಮ ಕರ್ತವ್ಯವೇ ಆದರೂ ಕೆಲವು ಯಕ್ಷರಾಕ್ಷಸಭೂತಪ್ರೇತಾದಿಗಳಾದ ದುಷ್ಟಜಂತುಗಳನ್ನು ಸಂತೋಷಪಡಿಸಲು ಆಡು, ಎಮ್ಮೆ, ಕೋಳಿಗಳನ್ನು ಕಡಿದು ಅವರಿಗೆ ಪಾಪಬಲಿ ನೀಡಿ, ಆ ದುಷ್ಟಭೂತಗಳನ್ನು ಮನದಲ್ಲಿ ಆವಾಹಿಸಿ ಭ್ರಮಿಸಿ ಆಡಿ ಕೆದರಿ ಸುತ್ತಲೂ ನಿಂತಿರುವ ಅಮಾಯಕರನ್ನೂ ಬ್ರಮಿಸಿ, ಪ್ರಸಾದ ನೀಡಿ, ಈ ದುಷ್ಟಪ್ರವೃತ್ತಿಯಿಂದ ವಶದಲ್ಲಿಟ್ಟು ನಡೆಸುವುದು ಎಂಥ ಬುದ್ಧಿಮಾಂದ್ಯ!
ಕಷ್ಟ! ಈ ದ್ರೋಹಿಗಳಿಗೆ ಆ ದುಷ್ಟಜಂತುಗಳ ಅನುಗ್ರಹದಿಂದ ಇಲ್ಲಿ ಸಿದ್ಧಿಸುವ ಫಲವು ದುರ್ವ್ಯಾಧಿ, ದುಷ್ಕೀರ್ತಿ, ದುರ್ಮೃತಿ ಮೊದಲಾದ ಉಪದ್ರವಗಳೇ ಆಗಿವೆ. ಹೀಗಲ್ಲದೆ ಈ ರೀತಿಯ ದುಷ್ಟಪ್ರವೃತ್ತಿಗಳನ್ನು ಕೈಗೊಳ್ಳುವ ಕೆಲವು ಪಾಪಿಗಳು ಇಲ್ಲಿ ಸುಖಜೀವಿಗಳಾಗಿರುವರಾದರೂ, ಅವರು ಕೂಡ ಸತ್ತು ಅವರ ಉಪಾಸನಾಮೂರ್ತಿಗಳಾದ ದುಷ್ಟಪ್ರಾಣಿಗಳು ವಾಸಿಸುವ ನರಕಲೋಕಸೇರಿ, ಆ ಭೀಕರರ ದಾಸವೃತ್ತಿ ನಡೆಸಿ, ಅವರ ಭುಕ್ತೋಚ್ಛಿಷ್ಟಗಳಾದ ಅಸ್ಥಿ, ಕರುಳು, ತೊಗಲು ಮುಂತಾದ ಅಮೇಧ್ಯಗಳನ್ನು ಭಕ್ಷಿಸಿ, ರಕ್ತ ಉಕ್ಕುವಾಗ ಅವರು ಹಿಡಿದು ಕಚ್ಚಿ ಹಸಿಯಾಗಿ ತಿಂದು ಕಾಷ್ಠಿಸಿಬಿಡುತ್ತಾರೆ. ಹಾ! ಕಷ್ಟ! ಈ ಪಾಪಿಗಳ ಭೂತ ಮತ್ತೆ ತಲೆಕೆಳಗಾಗಿ ಭೂಮಿಯಲ್ಲಿ ಬಿದ್ದು ಹುಲ್ಲಾಗಿ ಹೋಗುತ್ತದೆ. ಅಥವಾ ಪಾಪಯೋನಿಗಳಲ್ಲಿ ಹುಟ್ಟಿ ಪರಿತಪಿಸಿ ಸಾಯುತ್ತವೆ. ಹೀಗೆ ಇವರಿಗೆ ಇಹಪರಗಳಲ್ಲಿಯೂ ನಿತ್ಯ ಉಪದ್ರವದ ಫಲವಲ್ಲದೆ ಕಿಂಚಿತ್ಸುಖವೂ ಎಂದಿಗೂ ಕೈಗೂಡುವುದಿಲ್ಲ.
ಈ ವಿಧವಾದ ಘೋರಕರ್ಮಗಳನ್ನು ಪ್ರಜ್ಞಾಪೂರ್ವಕವಾಗಿಯೇ, ಆ ದುಷ್ಟಭೂತಗಳ ಉಪದ್ರವ ಉಂಟಾದೀತ್ತೆಂದು ಹೆದರುತ್ತ, ಕೈಗೊಂಡರೆ ಆ ದುರ್ದೇವತೆಗಳ ಉಪದ್ರವ ನಮ್ಮಲ್ಲಿ ಉಂಟಾಗದಿರಲು ಬೇರೆ ಉಪಾಯವಿದೆ. ಹೇಗೆಂದರೆ, ಈ ದುಷ್ಟಜಂತುಗಳಿಗಿಂತ ಹೆಚ್ಚಿನ ಶಕ್ತಿಯುಳ್ಳವರಾದ ಶುದ್ಧದೈವಗಳು ಅನೇಕರಿದ್ದಾರಲ್ಲ! ಅವರ ಸೇವೆ ಮಾಡಿ ಸಂತೋಷಪಡಿಸಿದರೆ ಈ ಉಪದ್ರವ ನಮ್ಮಲ್ಲಿ ಎಂದೂ ಉಂಟಾಗದು. ಆದ್ದರಿಂದ ನಾವು ಯಾವ ಪ್ರಾಣಿಗೂ ಉಪದ್ರವ ಉಂಟಾಗದ ರೀತಿಯ ಪ್ರವೃತ್ತಿಗಳನ್ನು ಕೈಗೊಂಟು ಸನ್ಮಾರ್ಗಿಗಳಾಗಿ ಶುದ್ಧೋಪಚಾರಗಳೊಂದಿಗೆ ಶುದ್ಧದೇವತೆಗಳನ್ನು ಭಜಿಸಿ ಒಲಿಸಿಕೊಳ್ಳಬೇಕು. ಆಗ ಅವರ ಅನುಗ್ರಹದಿಂದ ನಮಗೆ ಹೃದಯಪ್ರಸದವುಂಟಾಗಿ ಎಲ್ಲ ಐಹಿಕಭೋಗಗಳೂ ನ್ಯಾಯವಾಗಿ ಅನುಭವಿಸಿ, ತೃಪ್ತಿಯೊಂದಿ, ಭೋಗಗಳಲ್ಲಿ ವೈರಾಗ್ಯವುಂಟಾಗಿ, ಬ್ರಹ್ಮಜ್ಞಾನಿಗಳಾಗಲು ಸಾಧ್ಯವಾಗುತ್ತದೆ. ಒಂದುವೇಳೆ ಈ ಜನ್ಮದಲ್ಲಿ ಕರ್ಮಶೇಷದಿಂದಾಗಿ ಇದು ಸಾದ್ಧ್ಯವಾಗದಿದ್ದರೂ ಆಯುಸ್ಸು ಮುಗಿಯುವಾಗ ನಮ್ಮ ಉಪಾಸನಾಮೂರ್ತಿಗಳಾದ ಶುದ್ಧದೈವಗಳು ವಾಸಿಸುವ ದಿವ್ಯಸ್ಥಳಸೇರಿ, ಅವರೊಂದಿಗೆ ಅಲ್ಲಿನ ದಿವ್ಯಭೋಗಗಳನ್ನು ಸೇವಿಸಿ, ನಿವೃತ್ತರಾಗಿ ಭೂಮಿಗೆ ಬಂದು ಪುಣ್ಯಯೋನಿಗಳಲ್ಲಿ ಜನಿಸಿ, ಉತ್ತಮಗುಣಗಳೊಂದಿಗೆ ಬೆಳೆದು ಎಲ್ಲ ಭೋಗಗಳಲ್ಲೂ ವಿರಕ್ತಿಯುಂಟಾಗಿ, ಬ್ರಹ್ಮಜ್ಞಾನಿಗಳಾಗಿ, ಸುಖವಾಗಿದ್ದು ಪರಮಪದ ಹೊಂದುವರು ಎಂಬುದಕ್ಕೆ ಯಾವ ಸಂಶಯವೂ ಇಲ್ಲ.
ಹಾ! ಹಾ! ಚಿತ್ರ! ಚಿತ್ರ! ಕೈಯಲ್ಲಿರುವ ಕಲ್ಪಕವೃಕ್ಷದ ಹಣ್ಣನು ಭಕ್ಷಿಸದೆ ಎಸೆದು, ಕಾರಸ್ಕರದ ಹಣ್ಣು ಹುಡುಕ್ಕುತ್ತ ಭಕ್ಷಿಸಿ, ವಿಷದಿಂದ ಸಾಯುವರು. ಕಷ್ಟ! ಕಷ್ಟ!
ಅದು ಹಾಗಿರಲಿ! ಇದಲ್ಲದೆ, ಕೆಲವು ಉದರಂಭರಿಗಳು ಎಲ್ಲ ಪ್ರಾಣಿಗಳನ್ನು ದೇವರು ನಮ್ಮ ಬಳಕೆಗೆಂದೆ ಸೃಷ್ಟಿಸಿದ್ದಾನೆ, ನಾವು ಅವುಗಳನ್ನು ಕೊಂದು ತಿನ್ನುವುದರಿಂದ ಯಾವ ಪಾತಕವೂ ಉಂಟಾಗುವುದಿಲ್ಲ ಎಂದೂ ಆರವ ನಡೆಸಿಕೊಂಡು ಬಾಯಿಲ್ಲದ ಪ್ರಾಣಿಗಳನ್ನು ಕೊಂದು ಬದುಕುಸಾಗಿಸುತ್ತಾರೆ. ಕಷ್ಟ! ಹೀಗೆ ಮಾನವರ ಬಳಕೆಗೆಂದೇ ದೇವರು ಎಲ್ಲ ಪ್ರಾಣಿಗಳನ್ನೂ ಸೃಷ್ಟಿಸಿದ್ದರೆ ಅವು ಪರಸ್ಪರ ಹಿಡಿದು ತಿನ್ನುವುದಕ್ಕೂ, ಅವು ಕೆಲವೊಮ್ಮೆ ಮಾನವರನ್ನು ಅಪಹರಿಸುವುದಕ್ಕೂ ಅವಸರ ಉಂಟಾಗುತ್ತಿತ್ತೇ? ಇಲ್ಲ. ಮಗನಿಗೆ ಅಮ್ಮನ ಮೊಲೆಹಾಲನ್ನು ಉಪಯೋಗಿಸುವುದಲ್ಲದೆ ಅಮ್ಮನನ್ನು ಕೊಂದು ಮಾಂಸವನ್ನು ಉಪಯೋಗಿಸಬೇಕೆಂಬ ದೈವಸಂಕಲ್ಪ ಸಾದ್ಧ್ಯವೇ? ಅದು ಎಂದಿಗೂ ಉಂಟಾಗುವುದಿಲ್ಲ. ಅಂತೆಯೇ ದೇವರು ಮಾನವರ ಬಳಕೆಗೆಂತೇ ಪ್ರಾಣಿಗಳನ್ನು ಸೃಷ್ಟಿಸಿದ್ದಾನೆಂಬ ವ್ಯವಹಾರವು ಅವುಗಳ ಕ್ಷೀರಾದಿಗಳಲ್ಲಿ ಆಗಿದ್ದರೆ ಎಷ್ಟೋ ನ್ಯಾಯಯುತವಾಗುತ್ತಿತ್ತು? ಆಗ ಅಚರ ಪದಾರ್ಥಗಳಾದ ಧಾನ್ಯಾದಿಗಳನ್ನೆಲ್ಲ ಮಾನವರ ಬಳಕೆಗೆಂದೇ ದೇವರು ಸೃಷ್ಟಿಸಿರುವನೆಂದೂ, ಕ್ಷೀರಾದಿಗಳ ಉಪಯೋಗವನ್ನು ಮನಗಂಡಲ್ಲದೆ ಪಶು ಮುಂತಾದವುಗಳನ್ನು ಸೃಷ್ಟಿಸಿದ್ದಲ್ಲವೆಂದು ಸ್ಪಷ್ಟವಾಗುತ್ತದೆ. ಅದೂ ಅಲ್ಲ, ಪ್ರಾಣಿಗಳನ್ನು ತಿನ್ನುವುದರಲ್ಲಿಯೇ ಮನುಷ್ಯತ್ವ ಸಿದ್ಧಿಸುತ್ತದೆ ಎಂದಾದರೆ ವ್ಯಾಘ್ರಾದಿಗಳಾದ ಕ್ರೂರಜಂತುಗಳಲ್ಲಿ ಅಲ್ಲವೇ ಅತಿಮಾನುಷತ್ವ ಸಿದ್ಧಿಸಬೇಕಾದ್ದು? ಹಾಗಿದ್ದಲ್ಲಿ ಕೆಲವು ಜೀವಕಾರುಣ್ಯವುಳ್ಳ ಜನರೇ ಮೃಗಗಳಾಗಿ ಉಳಿದಿರುವುದು ಎಂದಲ್ಲವೇ ಇದರರ್ಥ? ಸೊಗಸಾಗಿದೆ, ಈ ಅಸಂಗತಿಗಳು ದೇವರಲ್ಲಿ ಸ್ಥಾಪಿಸಿ ಹೇಳುವುದಕ್ಕಿಂದ ಹೆಚ್ಚಿನ ದೈವದೂಷಣವುಂಟೇ? ಈ ದ್ರೋಹಿಗಳ ಪಕ್ಷದಲ್ಲಿ ಪರಲೋಕವೂ ಪರಲೋಕವಾಸಿಗಳೂ ಖಂಡಿತ ಇದ್ದಾರೆ. ಆದರೂ ಅಂಥ ವ್ಯವಹಾರದಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ದೈವವು ಒಂದು ಮಾತ್ರ. ಅವನು ಅರೂಪಿಯಾಗಿಯೂ ಸರ್ವವ್ಯಾಪಿಯಾಗಿಯೂ ಇರುವುದರಿಂದ ನಾವು ಅವನನ್ನು ಭಜಿಸುವುದಕ್ಕೂ, ಅವನು ವಿಧಿಸುವ ಶಿಕ್ಷೆರಕ್ಷೆಗಳನ್ನು ಅನುಭವಿಸುವುದಕ್ಕೂ ಮತ್ತೊಂದೆಡೆ ವಾಸವಾಗುವ ಅಗತ್ಯವಿಲ್ಲ. ಹಾಗೆ ಬೇಕಿದ್ದಲ್ಲಿ ಶಿಕ್ಷೆರಕ್ಷೆಗಳನ್ನು ಅನುಭವಪಡಿಸಲು ಅವನು ನಿಯುಕ್ತಿಪಡಿಸಿದ ಕೆಲವರೂ ಅಲ್ಲಿರಬೇಕು. ಆಗ ಇಷ್ಟೋಪಚಾರಗಳೊಂದಿಗೆ ಅವರನ್ನು ಭಜಿಸಿ ಅವರ ಮೆಚ್ಚುಗೆ ಪಡೆಯುವುದು ಅಗತ್ಯವಾಗುತ್ತದೆ. ಈ ಯಾವುದನ್ನೂ ನೆನೆಯದೆ ದೇವರು ನಿಗದಿಪಡಿಸಿದ ಶಿಕ್ಷೇರಕ್ಷೆಗಳನ್ನು ಅನುಭವಿಸಲು ಸ್ವರ್ಗನರಕಗಳಿವೆಯೆಂದು ವೃಥಾ ವ್ಯವಹಿರಿಸಿಕ್ಕೊಂಡು ದುಷ್ಟವೃತ್ತಿಗಳನ್ನು ನಡೆಸುವ ಈ ಪಾಪಿಗಳೂ ಸತ್ತು ನರಕದಲ್ಲಿ ಬಿದ್ದು ಅಲ್ಲಿರುವ ಹುಲಿಗಳ ಪಾಲು ಕೊಡದೆ ಆತ್ಮಾರ್ಥವಾಗಿ ಪ್ರಾಣಿಗಳನ್ನು ಕೊಂದು ತಿಂದುದ್ದರಿಂದ ಅವರುಕೂಡ ಕೃದ್ಧರಾಗಿ ಕ್ಷಣದಲ್ಲಿ ಹಿಡಿದುಕಚ್ಚಿ ಹಸಿಯಾಗಿ ತಿಂದು ಕಾಷ್ಠಿಸಿಬಿಡುವಾಗ ಅವರ ಪ್ರೇತವು ಮೇಲಿನಂತೆಯೇ ಭೂಮಿಯಲ್ಲಿ ಬಿದ್ದು ಹುಲ್ಲಾಗಿಬಿಡುತ್ತದೆ.
ಮತ್ತೆ ಕೆಲವರು ದೇವನು ಯಾರು, ದೇವಿ ಯಾರು ಎಂದೆಲ್ಲ ಉದ್ಘೋಷಿಸುತ್ತ ಜೀವಕಾರುಣ್ಯವಿಲ್ಲದ ವೃತ್ತಿಗಳನ್ನು ಕೈಗೊಂಡು ಕಾಲ ಕಳೆಯುತ್ತಾರೆ. ಅವರು ಕೂಡ ಸತ್ತು ಮೇಲಿನಂತೆ ನರಕದಲ್ಲಿ ಬಿದ್ದು ಅಲ್ಲಿನ ಎಲ್ಲ ಉಪದ್ರವಫಲವನ್ನು ಭುಜಿಸಿ ಅಧೋಮುಖರಾಗಿ ಭೂಮಿಯಲ್ಲಿಬಿದ್ದು ತೃಣಜಳೂಕಾದಿ ಪಾಪಯೋನಿಗಳಲ್ಲಿ ಹುಟ್ಟಿ ತಪಿಸಿ ಸಾಯುವರು. ಮತ್ತೆ ಕೆಲವರು ಸರ್ವಪ್ರಪಂಚವೂ ಪರಮಾಣುಗಳ ಸಂಯೋಗದಿಂದ ಉಂಟಾದುದ್ದಲ್ಲದೆ ಅದಕ್ಕೆ ಬೇರೆ ಯಾವ ಕಾರಣವೂ ಇಲ್ಲ ಎಂದು ಅಹಂಮತಿಗಳನ್ನು ಕೈಗೊಂಟು ದುರ್ವ್ಯಾಪಾರಿಗಳಾಗಿ ತನ್ನಿಂದ ನಿಯಮಿಸಲಾದ ಪರಮಸಾದ್ಧ್ಯವಾದ ಪರಮಾಣುವ್ಯೂಹ ಸಾಧನಬುದ್ಧಿವೃತ್ತಿಯ ವ್ಯಾಪಕಧರ್ಮದಲ್ಲಿ ಬೆರೆತು ಸಾಧ್ಯಸಾಧನಮುಕ್ತರಾಗಿ ಆ ಶುದ್ಧಶೂನ್ಯದಲ್ಲಿ ಮೋಹಿಸಿ ಮಲಗಲುಕೂಡ ಸಾದ್ಧ್ಯವಾಗದೆ ವೃಥಾ ಸತ್ತು ನರಕದಲ್ಲಿ ಬಿದ್ದು ದುಃಖಿಸಿ ನರಕದನಂತರ ಭೂಮಿಯಲ್ಲಿ ಬಿದ್ದು ಕೃಮಿಕೀಟಗಳಾಗಿ ಹೋಗುವರು.
ಈ ಸಂಗತಿಗಳೆಲ್ಲವೂ ಪ್ರಥಮದೃಷ್ಟಿಯಲ್ಲಿಯೇ ಹಗುರವೆಂದು ತಿಳಿದು ಅಲ್ಲಗಳೆಯದೆ ಸಕಲ ಸಮಯಿಗಳೂ ಯುಕ್ತಿನ್ಯಾಯಗಳೊಂದಿಗೆ ಯೋಚಿಸಿ ನೋಡಿದರೆ ಇದು ನಾವು ಉಜ್ಜೀವಿಸುವುದರಲ್ಲಿ ಒಳ್ಳೆಯ ಒಂದು ಮಾರ್ಗ.