ಕಾಣಲ್ಪಡುವುದೆಲ್ಲವೂ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಈ ಮೂರು ರೂಪಗಳಿಂದ ಕೂಡಿರುವುದೂ, ಪರಮಾತ್ಮನಿಂದ ಉಂಟಾಗಿ, ಅದರಲ್ಲಿಯೇ ಲೀನವಾಗುವುದೂ ಆಗಿದೆ. ಆದ್ದರಿಂದ ಪರಮಾತ್ಮನಲ್ಲದೆ ಬೇರೇನೂ ಇಲ್ಲ. ಸಕಲ ಪಾಪಗಳನ್ನೂ ನಾಶಗೊಳಿಸುವ-ಹುರಿದು ಕಳೆಯುವ-ಪರಮಾತ್ಮನ ಯಾವ ಸ್ವರೂಪ ನನ್ನ ಬುದ್ಧಿಯನ್ನು ತಿಳಿಗೊಳಿಸಿ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದೋ, ಧ್ಯಾನಿಸಬೇಕಾದ ಪರಮಾತ್ಮನ ಆ ದಿವ್ಯರೂಪವನ್ನು ನಾನು ಧ್ಯಾನಿಸುತ್ತೇನೆ. ಹೇ ಪರಮಾತ್ಮನೇ, ಈ ಪ್ರಕಾರ ಎಡೆಬಿಡದೆ ನನಗೆ ತಮ್ಮನು ಧ್ಯಾನಿಸುವುದಕ್ಕೂ, ತಮ್ಮ ಪರಮಾನಂದ ಲಭಿಸುವುದಕ್ಕೂ ತಮ್ಮ ಅನುಗ್ರಹ ನನ್ನಲ್ಲಿ ಉಂಟಾಗಲಿ. ಹೇ ದೈವವೇ, ಕಣ್ಣಿಂದ ಕಾಣುವುದೊಂದೂ ನಿತ್ಯವಲ್ಲ. ಶರೀರವೂ ನೀರಿನ ಗುಳ್ಳೆಯಂತೆ ನೆಲೆ ಇಲ್ಲದ್ದು. ಎಲ್ಲವೂ ಸ್ವಪ್ನಸಮಾನವೆಂದಲ್ಲದೆ ಏನೂ ಹೇಳುವಂತಿಲ್ಲ. ನಾವು ಶರೀರವಲ್ಲ, ಅರಿವು. ಶರೀರ ಉಂಟಾಗುವ ಮುನ್ನವೂ ಅರಿವಾದ ನಾವಿದ್ದೆವು. ಇನ್ನು ಇದೆಲ್ಲವೂ ಇಲ್ಲದೆ ಹೋದರೂ ನಾವು ಹೀಗೆ ಪ್ರಕಾಶಿಸುತ್ತಲೇ ಇರುತ್ತೇವೆ. ಜನನ, ಮರಣ, ಬಡತನ, ರೋಗ, ಭಯ ಇವೇನೂ ನಮ್ಮನ್ನು ಮುಟ್ಟುವುದಿಲ್ಲ. ಈ ರೀತಿ ಉಪದೇಶಿಸಲ್ಪಡುವ ತಿರುವಾಕ್ಕುಗಳನ್ನೂ, ಈ ತಿರುವಾಕ್ಕುಗಳ ಉಪದೇಶಕನಾದ ಪರಮಾತ್ಮನನ್ನೂ ನಾನು ಉಣ್ಣುವಾಗಲೂ ಮಲಗುವಾಗಲೂ ಎಡೆಬಿಡದೆ ಯಾವಾಗಲೂ ನೆನೆಯುವಂತಾಗಲಿ. ನೀನು ನನ್ನ ಎಲ್ಲ ಪಾಪಗಳನ್ನೂ ಕಸಿದುಕೊಂಡು ನನಗೆ ನಿನ್ನ ಪರಮಾನಂದವನ್ನು ನೀಡಬೇಕು. ನನ್ನ ಲೋಕವಾಸವು ಕಷ್ಟಗಳು ಕೂಡದೆ ಕಳೆಯುವುದಕ್ಕೂ, ಕಡೆಯಲ್ಲಿ ನಿನ್ನ ಪರಮಪದವನ್ನು ಪ್ರಾಪಿಸುವುದಕ್ಕೂ ನಿನ್ನ ಅನುಗ್ರಹವು ನನ್ನಲ್ಲಿ ಉಂಟಾಗಲಿ.