ಆಡು ಹಾವೇ, ಹುತ್ತ ಹುಡುಕು ಹಾವೇ
ಇನಿಮೆಯಾನಂದ ಕುಣಿತ ಕಂಡಾಡು ಹಾವೇ
ತಿಂಗಳೂ ಕಕ್ಕೆಯೂ ತೊಟ್ಟಿರುವ ಈಶನ
ಪಾದಪಂಕಜ ಸೇರಿ ನಿಂದಾಡು ಹಾವೇ
ಬೂದಿತೊಟ್ಟು ಮೆರೆವಂಥ ಸಿರಿಮೈಯನು
ಕಣ್ಣೀರುಕ್ಕುವಂತೆ ಕಂಡಾಡು ಹಾವೇ
ಸಾವಿರಕೋಟಿ ಅನಂತ ನೀ ಆನನ
ಸಾವಿರವನೂ ತೆರೆದಾಡು ಹಾವೇ
ಓಮೆಂದು ಮೊದಲಾಗಿದ ಕೋಟಿಮಂತ್ರದ ತಿರುಳು
ನಾವೆಂದರಿಯುತ್ತಲಾಡು ಹಾವೇ
ಪ್ರೇತವೂ ಹೆಣವೂ ಹೇರುವ ಸುಡುಗಾಡು
ಮೇಯುವ ಪರತಿರುಳನಾಡು ಹಾವೇ
ಹೂಗಂಧ ಸೂಸುವ ಮುಡಿಯುಳ್ಳವಳೊಳು
ಕೂಡುವಾ ಕೋಮಳಮೈಯ ಕಂಡಾಡು ಹಾವೇ
ನಾದದಲಿರುವಂತ ನಮಶ್ಶಿವಾಯದ ತಿರುಳು
ಆದಿಯಾಗುಳ್ಳದೆಂದಾಡು ಹಾವೇ
ಹೂಮಲರನೂ ತಿರುಮಾಲೂ ಯಾರೂ
ಹೊನ್ನ ಹೂಮೈ ಕಂಡಿಲ್ಲೆಂದಾಡು ಹಾವೇ
ಕಾಮನ ಸುಟ್ಟ ಕಣ್ಣುಳ್ಳ ಕಾಲಾರಿಯ
ನಾಮವ ಸವಿದುನಿಂತಾಡು ಹಾವೇ
ಬೆಳ್ಳಿಮಲೆಯಲಿ ಬೆಳಗುವ ವೇದತಿರುಳೇ
ಒಳಗೆ ಆಡುತ್ತಿರುವುದೆಂದಾಡು ಹಾವೇ
ಎಲ್ಲವನಿಳಿಸಿ ತೆಗೆಯುವೇಕನ ಪದ
ಪಲ್ಲವವ ಹತ್ತಿ ನಿಂತಾಡು ಹಾವೇ
ಎಲ್ಲ ಅರಿವನೂ ನುಂಗಿ ಬರಿಬಯಲ
ಎಲ್ಲೆಯೊಳೇರಿ ನಿಂತಾಡು ಹಾವೇ
ಎಲ್ಲವ ನುಂಗಿ ಸಾಟಿಯಿಲ್ಲದೆ ನಿಲುವ
ಸೊಲ್ಲೆಲ್ಲೂ ಉಂಟು ನಿಂತಾಡು ಹಾವೇ
ಸೊಲ್ಲೆಲ್ಲವುಂಡು ಸೊಡರಾಗಿ ಏಳುವ
ತಿರುಳೆಲ್ಲೆಯಲ್ಲೇರಿ ನಿಂತಾಡು ಹಾವೇ
ದೇಹ ನಿಜವಲ್ಲ ದೇಹಿಯೊಬ್ಬನೀ
ದೇಹದೊಳಿರುವುದನರಿತು ಆಡು ಹಾವೇ
ನಾಡೂ ನಗರವೂ ಒಂದಾಗಿ ನಾಲಗೆಯಲಿ
ನಿಂತಾಡು ನಿನ್ನ ನಾಮವನೊರೆಯೊ ಹಾವೇ
ದೇಹವೂ ದೇಹಿಯೂ ಒಂದಾಗಿ ನುಂಗುವ
ಏಕನೂ ಉಂಟದನರಿಯೊ ಹಾವೇ
ಹೆಸರದರಿಂದಲೇ ಹೆಬ್ಬಯಲೆಂದಲ್ಲ
ಧರೆಯಾದಿ ತೋರಿತ್ತೆಂದಾಡು ಹಾವೇ
ಸೇರಿ ನಿಲ್ವ ತಿರುಳೆಲ್ಲವೂ ಕೆಂಗಮಲದಲಿ
ನೆರೆದುಹೋಗುವಂತೆ ನಿಂತಾಡು ಹಾವೇ